ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಪ್ರೇಮರೂಪಕ ರಾಧಾಂತರಂಗ

ಲೇಖಕರು :
ತಾರಾನಾಥ ವರ್ಕಾಡಿ
ಗುರುವಾರ, ಸೆಪ್ಟೆ೦ಬರ್ 10 , 2015

ಕಡತೋಕಾ ಅರ್ಪಿತಾ ಹೆಗಡೆ ಮತ್ತು ಕೊಂಡದ ಕುಳಿ ಅಶ್ವಿ‌ನಿ ಹೆಗಡೆ ಮಹಿಳಾ ಯಕ್ಷ ಭೂಮಿಕೆಯ ಸಮರ್ಥ ಕಲಾವಿದೆ ಯರು. ತಮ್ಮ ಕುಣಿತ ಅಭಿನಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಪ್ರಸಿದ್ಧಿ ಪಡೆದವರು. ಇವರೀರ್ವರೂ ಜತೆಯಲ್ಲಿ ಸೇರಿ ಪ್ರದರ್ಶಿಸುತ್ತಿರುವ ಯಕ್ಷರೂಪಕ ರಾಧಾಂತರಂಗ.

ಹೀಗೊಂದು ಕಲ್ಪನೆ ಹೊಳೆದದ್ದು ಅರ್ಪಿತಾಗೆ. ಇದು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದು ಅಶ್ವಿ‌ನಿ. ಹಾಡು ಹೊಸೆದು ಅದಕ್ಕೊಂದು ರೂಪ ಕೊಟ್ಟವರು ದಿವಾಕರ ಹೆಗಡೆ. ಪ್ರೋತ್ಸಾಹದ ನೆಲೆಯೊದಗಿಸಿದವರು ಸಿರಿಕಲಾಮೇಳದ ಸುರೇಶ ಹೆಗಡೆ ಕಡತೋಕಾ.

ಕತೆ ಹೀಗಿದೆ ಯಮುನೆಯ ತೀರದಲ್ಲಿ ರಾಧಾಕೃಷ್ಣರ ಮೊದಲ ಭೇಟಿ ನಡೆಯುತ್ತದೆ. ಪರಸ್ಪರ ಛೇಡಿಸುತ್ತ ನದೀತಟ ದಿಂದ ನಿರ್ಗಮಿಸುವಾಗ ಅವರ ಹೃದಯದಲ್ಲಿ ಪ್ರೇಮಾಂಕುರವಾಗುತ್ತದೆ. ಮಾರನೇ ದಿನ ರಾಧೆಗೆ ಶ್ರೀಕೃಷ್ಣನ ಕೊಳಲಧ್ವನಿ ಕೇಳಿ ಬರುತ್ತದೆ. ಕೃಷ್ಣನನ್ನು ನೋಡುವ ಹಂಬಲದಿಂದ ಕೊಳಲಧ್ವನಿಯನ್ನೇ ಲಕ್ಷಿಸಿ ಹುಡುಕುತ್ತಾ ಬಂದರೆ ಆಕೆಗೆ ಕೃಷ್ಣ ಕಾಣಿಸುತ್ತಾನೆ. ಆತನನ್ನು ಮಾತನಾಡಿಸಲು ತೊಡಗಿದರೆ ಕೃಷ್ಣ ಹುಸಿ ಮುನಿಸು ತಾಳಿ ಮೌನವಾಗಿರುತ್ತಾನೆ. ರಾಧೆ ನಾನಾ ರೀತಿಯಲ್ಲಿ ಕೃಷ್ಣನನ್ನು ಒಲಿಸಲು ಪ್ರಯತ್ನಿಸಿ ಸಫ‌ಲಳಾಗು ತ್ತಾಳೆ.

ಮತ್ತೆ ಕೆಲವು ದಿನಗಳ ಬಳಿಕ ರಾಧೆಯ ಪ್ರವೇಶ. ಕಂಸನ ಹೆಸರು ಕೇಳಿದರೇ ಭಯವಾಗುತ್ತದೆ. ಆತನಿರುವೆಡೆ ಕೃಷ್ಣ ಹೋಗುವನಲ್ಲ ಎಂಬುದು ಅವಳ ಆತಂಕ. ಕೃಷ್ಣನನ್ನು ಹೋಗುವುದಕ್ಕೆ ಬಿಡಲಾರೆನೆಂದು ಆತನನ್ನು ತಡೆದು ಕಂಬನಿ ಮಿಡಿಯುತ್ತಾಳೆ. ಹೋಗದಿರು ಎಂದು ಒತ್ತಾಯ ಮಾಡುತ್ತಾಳೆ.

ಆಗ "ಸಕಾರಣವಾಗಿಯೇ ಹೋಗುತ್ತಿದ್ದೇನೆ. ದುಷ್ಟಮಥನ ಒಂದು ಕೆಲಸವಾದರೆ ಇನ್ನೊಂದು ಅಮ್ಮನನ್ನು ಕಾಣುವುದು. ಹುಟ್ಟಿದಂದಿನಿಂದ ಹೆತ್ತ ತಾಯಿಯನ್ನು ನೋಡಿದವನಲ್ಲ. ಅಮ್ಮನ ಬಂಧನ ಬಿಡಿಸಬೇಕು' ಎಂದು ರಾಧೆಯನ್ನು ಸಂತೈಸುತ್ತಾನೆ. "ನಿನ್ನ ನೆನಪೇ ನನ್ನ ಉಸಿರು, ನಿನ್ನನ್ನು ಹೇಗೆ ಬಿಟ್ಟಿರಲಿ' ಎಂದು ರಾಧೆ ಕಳವಳಿಸುವಾಗ ಕೃಷ್ಣ, ರಾಧೆಗೆ ತನ್ನ ಕೊಳಲನ್ನು ಕೊಟ್ಟು "ಇದರಲ್ಲೇ ನನ್ನನ್ನು ನೋಡು' ಎಂದು ಮಥುರೆಗೆ ತೆರಳುತ್ತಾನೆ. ಇದು ರಾಧಾಂತರಂಗ ರೂಪಕದ ಕಥಾವಸ್ತು.

ವಿದ್ವಾನ್‌ ಗಣಪತಿ ಭಟ್ಟರ ಸುಶ್ರಾವ್ಯ ಹಾಡುಗಾರಿಕೆ, ಪರಮೇಶ್ವರ ಭಂಡಾರಿ- ರಾಕೇಶ ಮಲ್ಯರ ಚೆಂಡೆ ಮದ್ದಳೆಗಳ ಮಧುರನಾದಕ್ಕೆ ಅಶ್ವಿ‌ನಿ-ಅರ್ಪಿತಾರ ನವಿರಾದ ಲಾಲಿತ್ಯಪೂರ್ಣ ಕುಣಿತ, ಅಭಿನಯಗಳಿಂದ ರಾಧಾಕೃಷ್ಣರ ಮಧುರ ಪ್ರೇಮ ಪ್ರಕಟವಾಗುತ್ತದೆ. ಯಕ್ಷಗಾನದಲ್ಲಿ ನಡೆದ ನಾನಾಪ್ರಯೋಗಗಳ ಜತೆಗೆ ಇದೊಂದು ವಿಶಿಷ್ಟ, ವಿನೂತನ ಪ್ರಯೋಗವಾಗಿ ಮನಸೆಳೆಯುತ್ತದೆ.

ಹಿಂದೆ ಯಕ್ಷಗಾನ ಕಲಾವಿದರು ದೀಪಾವಳಿಗೆ ಮನೆ ಬಿಟ್ಟರೆ ಮತ್ತೆ ಮನೆ ಸೇರುತ್ತಿದ್ದುದು ಪತ್ತನಾಜೆಗೆ. ರಾಧಾಕೃಷ್ಣರಂತೆ ನಿಷ್ಕಾಮಪ್ರೇಮದಿಂದ ದಾಂಪತ್ಯ ನಡೆಸಿ ನಮಗಾಗಿ ಉಳಿಸಿಕೊಟ್ಟ ಯಕ್ಷಗಾನದಲ್ಲಿ ಇಂತಹ ಒಂದು ರೂಪಕ ಪ್ರದರ್ಶನಗೊಂಡಿರುವುದು ಅಭಿಮಾನದ ಸಂಗತಿ. ಜತೆಗೆ ವರ್ತಮಾನದ ತಲ್ಲಣಗಳಿಗೆ ಯಕ್ಷಗಾನ ಪ್ರತಿಕ್ರಿಯಿಸುವ ಒಂದು ಬಗೆಯೂ ಇಲ್ಲಿ ಅನಾವರಣಗೊಂಡಿದೆ. ರಾಧಾಕೃಷ್ಣರ ಪ್ರೇಮ ನೈಜ ಸ್ನೇಹದ ಬಗೆಯನ್ನು ಬಿಂಬಿಸುತ್ತದೆ. ಒಳಗೆ ಟೊಳ್ಳಾಗಿದ್ದರೂ ನವರಸಗಳ ಮಧುರನಾದ ಹೊರಡಿಸುವ ಕೊಳಲು ಒಂದು ಸಂಕೇತವಾಗಿ ಪ್ರೇಮ ಅಮರವಾಗುತ್ತದೆ. ಹದಿಹರಯದ ಹುಡುಗಿಯರೀರ್ವರೂ ಬಹಳ ಚೇತೋಹಾರಿಯಾಗಿ ಈ ರೂಪಕವನ್ನು ಪ್ರದರ್ಶಿಸುತ್ತಿದ್ದಾರೆ.

*********************


ಕೃಪೆ : udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ